ಪೋಲಿಯೊಮೈಯಲೈಟಿಸ್ -
 	ಕೇಂದ್ರನರಮಂಡಲದ ನರಕಣಗಳನ್ನು ವಿಶಿಷ್ಟ ಪ್ರರೂಪದ ವೈರಸುಗಳು ಆಕ್ರಮಿಸಿದಾಗ ಉಂಟಾಗುವ ಸಾಂಸರ್ಗಿಕ ರೋಗ.  ವಾಡಿಕೆಯಲ್ಲಿ ಪೋಲಿಯೊ.  ಮಕ್ಕಳ ಪಾಶ್ರ್ವ ವಾಯು, ಹೇನ್‍ಮೇಡಿನ್ ರೋಗ ಪರ್ಯಾಯ ನಾಮಗಳು.  ರೋಗಾಣುಗಳು ಮಿದುಳುಬಳ್ಳಿಯ ಮುಂಭಾಗದಲ್ಲಿರುವ ಕ್ರಿಯಾತ್ಮಕ ನರಕಣಗಳಿಗೂ ಇವಕ್ಕೆ ಅನುಗುಣವಾಗಿ ಕಶೇರುರಜ್ಜುವಿನಲ್ಲಿರುವ ಕ್ರಿಯಾತ್ಮಕ ನರಕಣಗಳಿಗೂ ಸ್ವಭಾವತಃ ಧಕ್ಕೆ ಉಂಟುಮಾಡುತ್ತವೆ.  ಕಶೇರುರಜ್ಜುವಿನ ನರಕಣಗಳು ಧಕ್ಕೆಗೆ ಈಡಾದಾಗಿನ ಸ್ಥಿತಿಗೆ ಪೋಲಿಯೊಎನ್ ಸೆಫಲೈಟಿಸ್ ಎಂದು ಹೆಸರು.

ಕ್ರಿ.ಪೂ. 1600 ರಷ್ಟು ಹಿಂದೆಯೇ ಈ ರೋಗದ ವಿಚಾರ ಈಜಿಪ್ಟಿನವರಿಗೆ ಗೊತ್ತಿತ್ತು.  ಪಾಶ್ಚಾತ್ಯ ವೈದ್ಯರ ಪೈಕಿ ಅಂಡರ್‍ವುಡ್ ಎಂಬ ಆಂಗ್ಲ ವೈದ್ಯನೇ ಈ ರೋಗದ ವಿಚಾರವಾಗಿ ಮೊದಲು ಪ್ರತಿಪಾದಿಸಿದ.  (ಕ್ರಿ. ಶ. 1784). ಸುಮಾರು ನೂರು ವರ್ಷಗಳ ಬಳಿಕ, 1887 ರಲ್ಲಿ ಹೇನ್ ಎಂಬಾತ ಈ ವಿಚಾರವನ್ನು ವೈದ್ಯಕೀಯವಾಗಿ ಸ್ಥಿರಪಡಿಸಿದ. 1890 ರಲ್ಲಿ ಇದರ ಸಾಂಕ್ರಾಮಿಕ ಲಕ್ಷಣಗಳ ಬಗ್ಗೆ ಮೇಡಿನ್ ಒಂದು ಪ್ರಕಟಣೆ ಹೊರಡಿಸಿದ.  ಲ್ಯಾಂಡ್‍ಸ್ಟೀನರ್ ಮತ್ತು ಪಾಪೆ ಎಂಬವರು ಪ್ರಯೋಗಾರ್ಥವಾಗಿ ಈ ರೋಗವನ್ನು ಕೋತಿಗಳಿಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾದರು (1909) ರಲ್ಲಿ.  ಎಂಡರ್ಸ್, ವೆಲ್ಲರ್ ಮತ್ತು ರಾಬಿನ್ಸ್ ಎಂಬವರು ಈ ಜೀವಿಗಳನ್ನು ಅಂಗಸತ್ತ್ವದಲ್ಲಿ ಕೃಷಿ ಮಾಡಿ ಬೆಳೆಸಿದರು (1949).

ಅಭಿವೃದ್ಧಿಶೀಲ ದೇಶಗಳ ಮಕ್ಕಳಲ್ಲಿಯೂ ಶಿಶುಗಳಲ್ಲಿಯೂ ಪೋಲಿಯೊ ಸರ್ವೇಸಾಮಾನ್ಯ ರೋಗ.  ಆದರೆ, ಅಭಿವರ್ದಿತ ಪಾಶ್ಚಾತ್ಯ ದೇಶಗಳಲ್ಲಿ ಇದಕ್ಕೆ ಈಡಾಗುವ ಮಕ್ಕಳ ವಯಸ್ಸು ಏರಿದೆ.  ಅಲ್ಲಿಯ ಸಾಮಾಜಿಕ ಸುಸ್ಥಿತಿ ಮತ್ತು ನೈರ್ಮಲ್ಯಗಳೇ ಇದರ ಕಾರಣ.  ರೋಗದ ತೀವ್ರತೆ ಮತ್ತು ಮರಣ ಸಂಖ್ಯೆ ವಯಸ್ಸಾದವರಲ್ಲಿ ಹೆಚ್ಚು.  ಅಲ್ಲದೆ, ಬೇಸಗೆಯ ಅಂತ್ಯ ಮತ್ತು ಚಳಿಗಾಲದ ಆದಿಯಲ್ಲಿ ಇದರ ಹೊಡೆತ ಹೆಚ್ಚು.  ರೋಗಾಣುಗಳು ದೇಹವನ್ನು ಪ್ರವೇಶಿಸಿದ ಬಳಿಕ ಸಂಪೂರ್ಣ ಚಿಹ್ನೆಗಳೊಂದಿಗೆ ರೋಗ ಕಾಣಿಸಿಕೊಳ್ಳಲು 7-14 ದಿವಸಗಳು ಬೇಕು.  ರೋಗಾಣುಗಳು ಅತ್ಯಂತ ಸೂಕ್ಷ್ಮವಾದವು, ಇವುಗಳಲ್ಲಿ ಬ್ರೂನ್‍ಹಿಲ್ಡೆ, ಲಾನ್‍ಸಿಂಗ್ ಮತ್ತು ಲಿಯಾನ್ ಎಂಬ ಮೂರು ಬಗೆಗಳುಂಟು.  ಇವು ದೇಹ ಪ್ರವೇಶಿಸಲು ಜೀರ್ಣಾಂಗಗಳು, ಗಂಟಲು ಮತ್ತು ಟಾನ್‍ಸಿಲುಗಳ ಅಡಿ ನೈಸರ್ಗಿಕ ಹೆಬ್ಬಾಗಿಲಿಗಳಿದ್ದಂತೆ.  ಮೂಗಿನ ಲೋಳೆಪೊರೆಯಲ್ಲಿ ಹರಡಿಕೊಂಡಿರುವ ಪ್ರಾಣ ನರದ ಕವಲುಗಳ ಮೂಲಕ ಇವು ಮಿದುಳನ್ನು ಪ್ರವೇಶಿಸುತ್ತವೆ ಎಂಬ ಹಳೆಯ ವಾದ ಆಧಾರರಹಿತವಾದುದು.  ಬಹುಶಃ ಜೀರ್ಣಾಂಗಗಳನ್ನು ಪೂರೈಸುವ ನರತಂತುಗಳ ಮೂಲಕ ಇವು ನರಮಂಡಲವನ್ನು ಪ್ರವೇಶಿಸಬಹುದು.  ಟಾನ್‍ಶೀಲುಗಳ ಮೇಲೆ ನಡೆಯುವ ಯಾವುದೇ ಶಸ್ತ್ರಕ್ರಿಯೆ ರೋಗಾಣುಗಳ ಪ್ರವೇಶಕ್ಕೆ ಅನುಕೂಲವಾಗುವುದಲ್ಲದೆ ಅಂಥ ಸಂದರ್ಭದಲ್ಲಿ ಕಶೇರುರಜ್ಜು ಸೋಂಕಿಗೆ ಒಳಗಾಗುವ ಸಂಭವ ಜಾಸ್ತಿ.  ಇವು ನರಗಳ ತಿರುಳುಧಾರೆಗಳಲ್ಲಿ (ಆ್ಯಕ್ಸನ್) ಪ್ರವಹಿಸಿ ನರಕಣಗಳನ್ನು ಹೊಕ್ಕು ಅಲ್ಲಿ ವೃದ್ಧಿಹೊಂದುತ್ತ ಇವನ್ನು ನಾಶ ಮಾಡಬಹುದು.  ಇಲ್ಲವೇ ತಾವೇ ನಾಶವಾಗಬಹುದು.  ಕೆಲವು ಕಾಲ ನರಕಣಗಳಲ್ಲಿ ಅಜ್ಞಾತವಾಗಿದ್ದು, ಸಂದರ್ಭ ಒದಗಿದಾಗ ಅಂದರೆ, ಅತೀವ ದೈಹಿಕ ಶ್ರಮ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಪುನಶ್ಚೇತನಗೊಂಡು ವೃದ್ಧಿಹೊಂದುವುದೂ ಉಂಟು.  ರೋಗಿಯ ಮಲದಿಂದ ಮಿಶ್ರಿತವಾಗಿರುವ ಕೊಳಗಳಲ್ಲಿ ವ್ಯಕ್ತಿ ಈಜುವಾಗ ಆತನ ಬಾಯಿ ಮೂಲಕ ನೀರು ಒಳಹೊಕ್ಕು ಕ್ರಿಮಿಗಳು ಜೀರ್ಣಾಂಗಗಳನ್ನು ಪ್ರವೇಶಿಸುತ್ತವೆ.  ಒಂದು ಸಲ ರೋಗ ಬಂದು ವಾಸಿ ಆಗಿ ರೋಗ ವಿರುದ್ಧ ರಕ್ಷಣೆ ಉಂಟಾಗಿದ್ದರೂ ಎರಡನೆಯ ಸಲ ಬೇರೆ ವಿಭೇದದ (ಸ್ಟ್ರೆಯ್ನ್) ರೋಗಾಣುಗಳು ಪ್ರವೇಶಿಸಿದರೆ ರೋಗ ಪುನಃ ಉಂಟಾಗುತ್ತದೆ.

ಪೋಲಿಯೊ ರೋಗವನ್ನು ಕೋತಿಗಳಿಗೆ ಬರುವಂತೆ ಮಾಡಬಹುದಾದರೂ ನೈಸರ್ಗಿಕವಾಗಿ ಇದು ಮಾನವನಿಗೆ ಮಾತ್ರ ಬರುವುದಾಗಿದೆ.  ಕ್ರಿಮಿಗಳನ್ನು ಪ್ರಾರಂಭಿಕಘಟ್ಟಗಳಲ್ಲಿ ಗಂಟಲಿನಿಂದಲೂ ತರುವಾಯ ಮಲದಿಂದಲೂ ಬೇರ್ಪಡಿಸಬಹುದು.  ಕೊಚ್ಚೆ ನೀರು ಮತ್ತು ನೊಣಗಳಲ್ಲಿ ಸಹ ಈ ಕ್ರಿಮಿಗಳನ್ನು ಪತ್ತೆ ಹಚ್ಚಬಹುದು.  ಇವು ಮಾನವ ದೇಹ ಸಂಪರ್ಕವಿಲ್ಲದೆ ಇನ್ನೂರು ದಿವಸಗಳ ತನಕವೂ ಬದುಕಬಲ್ಲವು.  ನರಕಣಗಳನ್ನು ಕ್ರಿಮಿಗಳು ಅತಿಕ್ರಮಿಸಿದಾಗ ಪ್ರತಿಕ್ರಿಯೆಯಾಗಿ ನರಕಣಗಳು ಕ್ಷಯಿಸುತ್ತವೆ.  

ರೋಗ ಲಕ್ಷಣಗಳು : ಪೋಲಿಯೊಮೈಯಲೈಟಿಸ್ ರೋಗ ಎರಡು ಹಂತಗಳಲ್ಲಿ ಘಟಿಸುತ್ತದೆ.  ಪೂರ್ವಾರ್ಧ ಘಟಕಕ್ಕೆ ಲಕ್ವಾತೀತ ಪೋಲಿಯೊ ಎಂದು ಹೆಸರು.  ಈ ಘಟ್ಟದಲ್ಲಿ ಅಂದರೆ ಸಾಂಕ್ರಾಮಿಕ ವ್ಯಾಧಿ ಕಾಲದಲ್ಲಿ ಕೆಲವರಲ್ಲಿ ಯಾವ ರೀತಿಯ ಲಕ್ವದ ಲಕ್ಷಣಗಳೂ ಇರುವುದಿಲ್ಲ.  ಕೇವಲ ಜ್ವರ, ಕೈಕಾಲುನೋವು, ತಲೆನೋವು, ಪ್ರತಿಸ್ಪಂದನ ನೋವು ಮತ್ತು ಗಂಟಲುಬೇನೆ, ಶೀತ ಇವುಗಳಿಂದ ರೋಗ ಪ್ರಾರಂಭವಾಗಿ ರೋಗಿಗಳು ಉಬ್ಬಳಿಕೆ, ವಾಕರಿಕೆ ಮತ್ತು ಅತಿಸಾರಗಳಿಂದ ನರಳುತ್ತಾರೆ.  ಈ ಪರಿಸ್ಥಿತಿ ಕೆಲವು ದಿವಸಗಳ ಪರ್ಯಂತ ಮಾತ್ರ ಇರುತ್ತದೆ.  ತಲೆನೋವು, ಬೆನ್ನು ಉರಿ ಮತ್ತು ಮಾಂಸಖಂಡಗಳ ಪ್ರತಿಸ್ಪಂದನನೋವುವು ಇವು ಮುಖ್ಯ ಚಿಹ್ನೆಗಳು.  ಸ್ನಾಯುಗಳು ಬಿರುಸಾಗಿದ್ದು ಕತ್ತು ಮತ್ತು ಬೆನ್ನನ್ನು ಬಗ್ಗಿಸುವುದು ದುಸ್ಸಾಧ್ಯವಾಗುತ್ತದೆ.  ರೋಗಿ ಕುಳಿತುಕೊಳ್ಳುವಾಗ ಬೆನ್ನೆಲುಬಿನ ಕಾಠಿಣ್ಯದಿಂದಾಗಿ ಒತ್ತಾಸೆಗೋಸ್ಕರ ಹಿಂಬದಿಗೆ ಕೈಗಳನ್ನು ಚಾಚಿ ತ್ರಿಪಾದ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ.  ಈ ಘಟ್ಟ ಉತ್ತರಾರ್ಧಕ್ಕೆ ಹೋಗದೆ, ಅಂದರೆ ಲಕ್ವ ಹೊಡೆಯದೆ, ಅಲ್ಲಿಗೇ ನಿಂತರೂ ನಿಲ್ಲಬಹುದು ಅಥವಾ ಮುಂದಿನ ಘಟ್ಟಕ್ಕೆ ಹೋಗಲೂಬಹುದು.  ಇದು ಉಗ್ರರೂಪ ತಾಳಿ ಪ್ರಸರಿಸಲೂಬಹುದು.  ಇಲ್ಲವೆ ಕೇಂದ್ರೀಕೃತವಾಗಿ ಲಘುವಾಗಿಯಾದರೂ ಇರಬಹುದು.  ಸಾಮಾನ್ಯವಾಗಿ ಲಕ್ವ ಎರಡರಿಂದ ಮೂರು ದಿವಸಗಳಲ್ಲಿ ತನ್ನ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ.  ಆದರೆ, ಕೆಲವು ವೇಳೆ ಕೆಲವು ದಿವಸಗಳನ್ನೇ ತೆಗೆದುಕೊಳ್ಳಬಹುದು.  ಅದು ಕೈಕಾಲುಗಳಿಂದ ಮೇಲೇರಿ ಕಶೇರುರಜ್ಜುವನ್ನು ತಲಪಿ ಪ್ರಾಣಾಂತಕಾರಿಯಾಗಲೂಬಹುದು.  ಮಿದುಳುಬಳ್ಳಿ ಅಥವಾ ಕಶೇರುರಜ್ಜು ಕಾಯಿಲೆಗೆ ಈಡಾಗಬಹುದು.  ಇವುಗಳಿಗೆ ಅನುಕ್ರಮವಾಗಿ ಬೆನ್ನು ಹುರಿಯ (ಸ್ಟೈಪಾನಲ್) ಪೋಲಿಯೊ ಮತ್ತು ಕಶೇರುರಜ್ಜುವಿನ (ಬಲ್ಬಾರ್) ಪೋಲಿಯೊ ಎಂದು ಹೆಸರು.

ಬೆನ್ನು ಹುರಿಯ (ಸ್ಟೈಪಾನಲ್) ಪೋಲಿಯೊ : ಇಲ್ಲಿ ಕೈಕಾಲುಗಳು ಮತ್ತು ಮುಂಡದ (ಪ್ರಮುಖವಾಗಿ ಕಾಲಿನ) ಐಚ್ಛಿಕ ಸ್ನಾಯುಗಳು ಲಕ್ವಕ್ಕೆ ಒಳಗಾಗುವುದರಿಂದ ಸ್ನಾಯುತಂತುಗಳು ಅದೃಢಗೊಳ್ಳುತ್ತವೆ.  ಹೊಟ್ಟೆ ಮತ್ತು ಎದೆಯ ಸ್ನಾಯುಗಳೂ ಹೊಡೆತಕ್ಕೆ ಈಡಾಗಬಹುದು.  ಇದು ಸುಧಾರಿಸುವುದಾದರೆ ಕೆಲವು ವಾರಗಳಲ್ಲಿ ಸ್ವಸ್ಥಿತಿಗೆ ಬರುತ್ತದೆ.  ಪಕ್ಷವಾಯು ಹಿಡಿದ ಸ್ನಾಯುಗಳು ಕ್ಷಯಿಸಿ ಸಡಿಲಗೊಂಡು ಕೈಕಾಲುಗಳಿಗೆ ವಕ್ರತೆ ಉಂಟುಮಾಡುತ್ತವೆ.  ಪ್ರಾರಂಭಿಕ ಘಟ್ಟದಲ್ಲಿ ಮೂತ್ರವಿಸರ್ಜನೆಗೂ ತಡೆ ಉಂಟಾಗಬಹುದು.  ವಪೆ ಮತ್ತು ಪಕ್ಕೆಲುಬುಗಳ ಮಾಂಸಖಂಡಗಳು ವ್ಯಾಧಿಗ್ರಸ್ತವಾಗುವುದರಿಂದ ಉಸಿರಾಟದಲ್ಲಿ ಏರುಪೇರಾಗುತ್ತದೆ.  ಶೀಘ್ರತರ ಉಸಿರಾಟ, ಮುಖ ಮತ್ತು ಕೈ ನೀಲಿಗಟ್ಟುವುದು (ಸಯನೋಸಿಸ್) ಇವು ಉಸಿರಾಟದ ಅಂಗಗಳು ರೋಗ ಪ್ರಕ್ರಿಯೆಗೆ ತುತ್ತಾಗಿರುವುದನ್ನು ಸೂಚಿಸುತ್ತವೆ.

ಕಶೇರುರಜ್ಜುವಿನ (ಬಲ್ಬಾರ್) ಪೋಲಿಯೊ : ಇಲ್ಲಿ ಕಶೇರುರಜ್ಜುವಿನ ಮೂಲ ಮತ್ತು ಅದರಲ್ಲಿರುವ ಮಿದುಳಿನಿಂದ ಹೊರಡತಕ್ಕ ನರಗಳ ಕಣಗಳು ರೋಗಕ್ಕೆ ಒಳಗಾಗುತ್ತವೆ.  ಗಂಟಲು, ಧ್ವನಿಪೆಟ್ಟಿಗೆ ಇವು ಬೇನೆಗೆ ಒಳಗಾದಲ್ಲಿ ಕುಗ್ಗಿದ ಸ್ವರ, ಜೊತೆಗೆ ತೊದಲು ನುಡಿ ಸಂಭವಿಸುತ್ತವೆ.  ಮಿದುಳಿನಿಂದ ಹೊರಡುವ ಐದನೆಯ ಮತ್ತು ಏಳನೆಯ ನರಗಳು ವಿರಳವಾಗಿ ಈಡಾಗುವುದುಂಟು.  ಕಣ್ಣುಗುಡ್ಡೆಗಳ ಓಲಾಟವೂ ಸಂಭವಿಸಬಹುದು.

ರೋಗದ ಅಂತ್ಯ ಮತ್ತು ಜಟಿಲತೆಗಳು : ಮೊದಲ ಬಾರಿ ಘಟಿಸುವಾಗ ರೋಗದ ಪರಿಣಾಮ ತೀವ್ರವಾಗಿಯೂ ವಿಸ್ತಾರವಾಗಿಯೂ ಇರುತ್ತದೆ.  ಗುಣಮುಖವಾಗುವುದಾದರೆ ಸಾಮಾನ್ಯವಾಗಿ ಕೆಲವು ದಿವಸಗಳಲ್ಲಿ ತೊಡಗಿ ಕೆಲವು ತಿಂಗಳುಗಳಲ್ಲಿ ಪೂರ್ಣ ಗುಣ ಹೊಂದುತ್ತದೆ.  ಆದರೆ, ವಪೆ ಮತ್ತು ಪಕ್ಕೆಲುಬುಗಳ ಮಾಂಸಖಂಡಗಳು ರೋಗಕ್ಕೆ ಈಡಾದವರಲ್ಲಿ ಪುನಶ್ಚೇತನ ಬಹಳ ಕಷ್ಟ.  ಕೃತಕ ಉಸಿರಾಟ ಸಹಾಯಕವಾಗಬಲ್ಲುದಾದರೂ ಅಂಗಾಂಗಗಳು ಇತರ ರೋಗಗಳಿಗೆ ಈಡಾಗುವ ಸಾಧ್ಯತೆ ಹೆಚ್ಚು.  ಬಲ್ಬಾರ್ ಪೋಲಿಯೊದಲ್ಲಿ ನ್ಯೂಮೋನಿಯಾ ರೋಗ ತಗಲಬಹುದು.

ಚಿಕಿತ್ಸೆ ಮತ್ತು ನಿವಾರಣೆ : ಈ ಮುಂದಿನ ಆರು ಕ್ರಮಗಳನ್ನು ಅನುಸರಿಸುವುದಿದೆ.

1  ರೋಗಿಗೆ ಸಂಪೂರ್ಣ ವಿಶ್ರಾಂತಿ ಕೊಡುವುದಲ್ಲದೆ ಆತ ಯಾವುದೇ ರೀತಿಯ ದೈಹಿಕ ವ್ಯಾಯಾಮವನ್ನು ಮಾಡದಂತೆ ನೋಡಿಕೊಳ್ಳಬೇಕು.  ಆತನ ಮಲಮೂತ್ರಗಳಲ್ಲಿ ರೋಗಾಣುಗಳಿರುವುದರಿಂದ ಕನಿಷ್ಠ ಮೂರು ವಾರಗಳ ತನಕ ಆತನನ್ನು ಪ್ರತ್ಯೇಕಿಸಿಡಬೇಕು ಮತ್ತು ಆತನ ಮಲಮೂತ್ರಗಳು ಇತರರಿಗೆ ಸಂಪರ್ಕಿಸದ ರೀತಿಯಲ್ಲಿ ಅವನ್ನು ನಾಶಪಡಿಸಬೇಕು.  

2  ಸ್ನಾಯುಗಳ ನೋವು ಮತ್ತು ತಲೆನೋವುಗಳಿಗೆ ಔಷಧಿಗಳ ಮೂಲಕ ಚಿಕಿತ್ಸೆ ಮಾಡಬೇಕು.  

3 ಅಂಗವಿನ್ಯಾಸ ಚಿಕಿತ್ಸೆ : ಸಂಪೂರ್ಣ ವಿಶ್ರಾಂತಿ ಕೊಟ್ಟು ವಕ್ರತೆಗಳು ಉಂಟಾಗದಂತೆ ಸರಿಯಾದ ಸ್ಥಿತಿಯಲ್ಲಿ ಅಂಗಗಳನ್ನು ಇಡಬೇಕು.  

4  ದೈಹಿಕ ಚಿಕಿತ್ಸೆ : ಇದನ್ನು ಜ್ವರ, ಸ್ನಾಯುಗಳ ನೋವು ಮತ್ತು ಪ್ರತಿಸ್ಪಂದನ ನೋವು ಕಡಿಮೆಯಾದ ಅನಂತರ ಪ್ರಾರಂಭಿಸಬೇಕು.  ಕೀಲುಗಳ ವಕ್ರತೆ ಉಂಟಾಗದಂತಿರಲು ಮೊದಲು ಅನಿರ್ದೇಶಿತ ಚಲನೆಗಳನ್ನು ಅನಂತರ ನಿರ್ದೇಶಿತ ಚಲನೆಗಳನ್ನೂ ಕೊಡಬೇಕು.  ಇವಾದಬಳಿಕ ಪುನಶಿಕ್ಷಣದ ವ್ಯಾಯಾಮಗಳನ್ನು ಕೊಡುವುದಲ್ಲದೆ ನಿತ್ರಾಣಗೊಂಡ ಸ್ನಾಯುಗಳಿಗೆ ವಿದ್ಯುತ್ ಚಿಕಿತ್ಸೆಯನ್ನೂ ಕೊಡಬೇಕು.

5 ಬಲ್ಬಾರ್ ಪೋಲಿಯೊದಲ್ಲಿ ರೈಲ್ಸ್ ಕೊಳವೆ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಹಾರವನ್ನು ಕೊಡಬೇಕು.  ರೋಗಿಯ ಕಾಲಿನಕಡೆ ಮಂಚವನ್ನು ಎತ್ತರಿಸುವುದರಿಂದ ಮತ್ತು ಆತನನ್ನು ಮಗ್ಗುಲಲ್ಲಿ ಮಲಗಿಸುವುದರಿಂದ ಆತ ಸ್ರವಿಸುವ ದ್ರವಗಳು ಹೊರಹೋಗುವಂತೆ ಮಾಡಬಹುದು.  ಉಸಿರಾಡಲು ತೊಂದರೆ ಉಂಟಾದಲ್ಲಿ ಶ್ವಾಸನಾಳ ಛೇದನ ಮಾಡಿ ಕೃತಕವಾಗಿ ಉಸಿರಾಡಲು ಅವಕಾಶ ಒದಗಿಸಬೇಕು.

6 ಪಾಪೆ ಮತ್ತು ಪಕ್ಕೆಲುಬುಗಳ ಮಾಂಸಖಂಡಗಳು ಕ್ಷೀಣಗೊಂಡಿದ್ದಲ್ಲಿ ಕೃತಕ ಉಸಿರಾಟ ಸಾಧನಗಳನ್ನು ಉಪಯೋಗಿಸಬೇಕು.
ಮುಂಜಾಗರೂಕತೆಯ ಕ್ರಮಗಳು : ವ್ಯಾಧಿ ಸಾಂಕ್ರಾಮಿಕವಾಗಿರುವ ಕಾಲದಲ್ಲಿ ಆರೋಗ್ಯವಾಗಿಯೇ ಇರುವ ರೋಗವಾಹಕರು ಮತ್ತು ಲಕ್ವಾತೀತ ಪೋಲಿಯೊ ರೋಗಿಗಳು ರೋಗ ಹರಡಲು ಕಾರಣರಾಗುವುದರಿಂದ ರೋಗವನ್ನು ತಡೆಗಟ್ಟುವ ಸಂಭವ ಕಡಿಮೆ ಮತ್ತು ಕಷ್ಟ.  ರೋಗ ಅಂಟಿದವರೊಡನೆ ಕನಿಷ್ಠ ಮೂರು ವಾರಗಳ ಕಾಲ ಸಂಸರ್ಗ ನಿಷೇಧವನ್ನು ವಿಧಿಸಬೇಕು.  ನೊಣಗಳ ನಿರ್ಮೂಲನಾ ಕ್ರಮವನ್ನು ಕೈಗೊಳ್ಳಬೇಕು.  ಸಾಂಕ್ರಾಮಿಕ ವ್ಯಾಧಿ ಕಾಲದಲ್ಲಿ ಎಲ್ಲ ವಿಧವಾದ ಸಣ್ಣ ಶಸ್ತ್ರಕ್ರಿಯೆಗಳನ್ನೂ ಚುಚ್ಚು ಮದ್ದು ಹಾಕುವುದನ್ನೂ ಮುಂದೂಡಬೇಕು.  

ಕೃತಕವಾಗಿ ರೋಗ ನಿರೋಧಕ ಸಾಮಥ್ರ್ಯವನ್ನು (ಅಬಾಧಿತತ್ವ) ಉಂಟುಮಾಡಲು ಎರಡು ವಿಧಗಳುಂಟು : ಚುಚ್ಚು ಮದ್ದಾಗಿ ಸಾಲ್ಕ್ ಮತ್ತು ಬಾಯಿ ಮೂಲಕ ತೆಗೆದುಕೊಳ್ಳಬಹುದಾದ ಸಾಬಿನ್ ಲಸಿಕೆ.  ಇವನ್ನು ಮಗುವಿಗೆ 5-6 ತಿಂಗಳುಗಳು ತುಂಬಿದ ಬಳಿಕ ಕೊಡಿಸಬೇಕು. ಸಾಲ್ಕ್ ಲಸಿಕೆಯಲ್ಲಿ ಮೂರು ಪಂಗಡಗಳೂ ಸೇರಿದ ನಿರ್ಜೀವ ಕ್ರಿಮಿಗಳನ್ನು ಉಪಯೋಗಿಸುತ್ತಾರೆ.  ತಿಂಗಳ ಅವಧಿಯಲ್ಲಿ ಎರಡು ಚುಚ್ಚುಮದ್ದುಗಳನ್ನೂ ಆರರಿಂದ ಒಂಬತ್ತು ತಿಂಗಳುಗಳ ಒಳಗೆ ಮೂರನೆಯದನ್ನೂ ಕೊಡಬೇಕು.  ಆದರೆ, ಈಗ ಬಾಯಿ ಮೂಲಕ ತೆಗೆದುಕೊಳ್ಳಬಹುದಾದ ಅತಿ ಸುಲಭ ರೀತಿಯ ಸಾಬಿನ್ ಲಸಿಕೆ ಮಾತ್ರೆ ರೂಪದಲ್ಲಿ ದೊರೆಯುತ್ತವೆ.  ಇದರಲ್ಲಿ ಎಲ್ಲ ಪಂಗಡಗಳಿಗೂ ಸೇರಿದ ತೀವ್ರತೆ ಕಡಿಮೆಯುಳ್ಳ ಜೀವಿಗಳಿರುತ್ತವೆ.  ಇದನ್ನು ಮೂರು ಬಾರಿ - ತಿಂಗಳ ಅವಧಿಯಲ್ಲಿ ಎರಡು ಮತ್ತು ಆರರಿಂದ ಒಂಬತ್ತನೆಯ ತಿಂಗಳೊಳಗೆ ಮೂರು - ಹೀಗೆ ಕೊಡಿಸತಕ್ಕದ್ದು.  ಇದು ಸಾಂಕ್ರಾಮಿಕ ವ್ಯಾಧಿಕಾಲದಲ್ಲಿ ಅತ್ಯಂತ ಪ್ರಯೋಜನಕಾರಿಯಾದುದು.  ಈ ಮಾತ್ರೆಗಳು ಉಪಯೋಗಿಸಲು ಅಂತೆಯೇ ತಯಾರಿಸಲು ಕೂಡ ಸುಲಭ.  ಇವುಗಳಿಂದ ಉಂಟಾಗುವ ಅಬಾಧಿತತ್ವ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.  ಇದು ಸತ್ವದಲ್ಲಿ ಸ್ವಾಭಾವಿಕ ರೋಗ ನಿರೋಧಕ ಸಾಮಥ್ರ್ಯವನ್ನು ಹೋಲುತ್ತದೆ.
(ಎಚ್.ಕೆ.ಪಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ